
- ಆಲೋಚನೆ - ಪ್ರಚೋದನೆ

*ವೀರರಿಗೆ ಧೀರತೆಯೇ ಆಭರಣ. ಅಧಿಕಾರಿಗಳಿಗೆ ದಕ್ಷತೆಯೇ ಆಭರಣ. ಸಜ್ಜನರಿಗೆ ಸದ್ಗುಣಗಳೇ ಆಭರಣ. ಧೀರತೆ, ದಕ್ಷತೆ, ಸದ್ಗುಣಗಳೆಂಬ ಆಭರಣ ಇಲ್ಲದವರು ಚಿಂತಿಸಬೇಕಿಲ್ಲ , ಚಿನ್ನಾಭರಣವಿದ್ದೇ ಇದೆಯಲ್ಲ !
= ಶ್ರೀ ಸ್ವಾಮಿ ಪುರುಷೋತ್ತಮಾನಂದಜಿ
*`‘ನಾಚಿಕೆ-ಮಾನ-ಮರ್ಯಾದೆ ಈ ಮೂರೂ ಬಿಟ್ಟವರು ಈಗ ದೊಡ್ಡವರಾಗಿದ್ದಾರೆ. ಅಂಥವರಿಗೇ
ನಮಸ್ಕಾರ ಹಾಕುವ ಅಧೋಗತಿಗೆ ಇಳಿದಿದ್ದೇವೆ. ಎಷ್ಟೊಂದು ತ್ಯಾಗ-ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯ ಎಲ್ಲಿಗೆ ಬಂದಿದೆ ಎಂಬುದನ್ನು ಒಮ್ಮೆ ನೆನಪಿಸಿಕೊಳ್ಳಿ. ಅಪ್ರಾಮಾಣಿಕತೆ, ಸ್ವಾರ್ಥ ದೇಶಕ್ಕೆ ಬಂದಿರುವ ದೊಡ್ಡ ಕುತ್ತು. ಇದನ್ನು ಹೀಗೇ ಮುಂದುವರಿಯಲು ಬಿಟ್ಟರೆ ವಿನಾಶದ ಅಂಚಿಗೆ ಹೋಗುವುದು ಖಂಡಿತ.’ = ನ್ಯಾ ಎಂ.ರಾಮಾ ಜೋಯಿಸ್
*ನಮ್ಮ ಪ್ರಪಂಚವನ್ನು ಕಾಡುತ್ತಿರುವ ಸಾವಿರಾರು ತಕರಾರುಗಳಿಗೆ, ಸಮಾಜದಲ್ಲಿ ಹಲಮಂದಿ ತಮ್ಮ ಯೋಗ್ಯತೆಯನ್ನು ಮೀರಿದ ಜಾಗಗಳಿಗಾಗಿ ಆಸೆಪಟ್ಟು ಸಾಹಸ ಮಾಡುತ್ತಿರುವುದೂ, ಇನ್ನು ಕೆಲವರು ಹೇಗೋ ದೊಡ್ಡ ಜಾಗಗಳನ್ನು ಆಕ್ರಮಿಸಿಕೊಂಡು ತಕ್ಕ ಯೋಗ್ಯತೆ ಸಂಪಾದಿಸಿಕೊಳ್ಳದಿರುವುದೂ ಕಾರಣಗಳೆಂಬ ಸಂಗತಿ ಸಾಮಾನ್ಯವಾಗಿ ಎಲ್ಲರ ಅನುಭವಕ್ಕೂ ಬಂದದ್ದು. ಕೈಹಿಡಿತ ಮೀರಿದ ತುತ್ತನ್ನು ಬಾಯೊಳಕ್ಕೆ ತುರುಕಿಕೊಂಡಾಗ ನಮಗಾಗುವ ಅನುಭವವೆಂಥಾದ್ದೋ ಅಂಥಾದ್ದು ಒಂದು ರೂಪಾಯಿ ಬಾಳುವವನು ಎರಡು ರೂಪಾಯಿಯವನೆಂಬಂತೆ ನಡೆದಾಗ ಸಮಾಜಕ್ಕಾಗುವ ಅನುಭವ. ಅದು ಅನರ್ಥ ಪರಂಪರೆ. = ಡಾ ಡಿ.ವಿ.ಗುಂಡಪ್ಪ
*ಧರ್ಮನಿಷ್ಠೆಯುಳ್ಳವನೂ, ಆತ್ಮವಿಕಾಸದಲ್ಲಿ ಶ್ರದ್ಧೆಯುಳ್ಳವನೂ ಯಾವುದಾದರೊಂದು ಬಗೆಯ ಸಾರ್ವಜನಿಕ ಕಾರ್ಯದಲ್ಲಿ ಸಾಧ್ಯವಿರುವಷ್ಟು ಮಟ್ಟಿಗೆ ಸೇರಲೇಬೇಕು. ನಮ್ಮ ಧರ್ಮಾಭಿಮಾನವು ಗೃಹಾವರಣದಿಂದ ಆಚೆಗೂ ಹರಿಯಬೇಕು. ನಮ್ಮ ಮನೆಯ ಗೋಡೆಗಳು ನಮ್ಮ ಬಾಳಿಗೆ ಬಂದೀಖಾನೆಯಾಗಬಾರದು. ನಮ್ಮ ಸ್ವಂತವಲ್ಲದ ಯಾವುದಾದರೊಂದು ಸೇವಾ ದೀಕ್ಷೆಯಿಂದಲೇ ನಮ್ಮ ಬಾಳು ಸಾರ್ಥಕವಾಗತಕ್ಕದ್ದು. = ಡಾ ಡಿ.ವಿ.ಗುಂಡಪ್ಪ